ಬ್ಯೋರ್ನ್‍ಸನ್, ಮಾರ್ಟಿನಸ್ ಬ್ಯೋರ್ನ್‍ಸ್ಟ್ಯೇರ್ನೆ
	1832-1910. ನಾರ್ವೆ ದೇಶದ ಜನಪ್ರಿಯ ಸಾಹಿತಿ, ಕಲಾವಿದ ಮತ್ತು ರಾಷ್ಟ್ರನಾಯಕ. ನೊಬೆಲ್ ಪಾರಿತೋಷಿಕ ವಿಜೇತ. 19ನೆಯ ಶತಕದ ನಾರ್ವೆಯ ನಾಲ್ವರು ಮಹಾಪುರುಷರಲ್ಲಿ ಒಬ್ಬ ಎನ್ನಲಾಗಿದೆ. ಕ್ವಿಕ್ನೆಯಲ್ಲಿ ಜನಿಸಿ ನೆಸ್ಸೆಟ್ ಎಂಬ ಹಳ್ಳಿಯಲ್ಲಿ ಬಾಲ್ಯ ಕಳೆದ. ಕಥೆಗಳನ್ನು ರಸವತ್ತಾಗಿ ಹೇಳಿ ಗೆಳೆಯರನ್ನು ಮರುಳುಗೊಳಿಸುತ್ತಿದ್ದ. ಈ ಬಾಲಕನಲ್ಲಿ ಆಗಲೆ ಸಾಹಿತ್ಯ ಪ್ರತಿಭೆ ಅರಳ ತೊಡಗಿತ್ತು. ಸತ್ಯ ನ್ಯಾಯಗಳಿಗಾಗಿ ಹೋರಾಡುವ, ಅನ್ಯಾಯದ ವಿರುದ್ಧ ಬಂಡೇಳುವ ಪ್ರವೃತ್ತಿ ಈತನಲ್ಲಿ ಬಾಲ್ಯದಲ್ಲೇ ಚಿಗುರೊಡೆದಿತ್ತು. 1852ರಲ್ಲಿ ಕ್ರಿಶ್ಚಿಯಾನ (ಈಗಿನ ಓಸ್ಲೋ) ವಿಶ್ವವಿದ್ಯಾಲಯದ ವಿದ್ಯಾರ್ಥಿಯಾದ. ಆಗಲೇ ತನ್ನ ಜೀವನದ ಧ್ಯೇಯ ಧೋರಣೆಗಳನ್ನು ರೂಪಿಸಿಕೊಂಡು ನಾಡಿನ ಸಂಪೂರ್ಣ ಸ್ವಾತಂತ್ರ್ಯ, ಭವ್ಯವಾದ ಸಾಂಸ್ಕøತಿಕ ಪರಂಪರೆಯ ಪೋಷಣೆ, ರಾಷ್ಟ್ರೀಯ ರಂಗಭೂಮಿಯ ಸ್ಥಾಪನೆ-ಈ ಸಾಧನೆಗಳಿಗಾಗಿ ಹೋರಾಡುವುದು ಎಂದು ನಿಶ್ಚಯಿಸಿದ.

	1567ರಲ್ಲಿ ಅಚ್ಚಗ್ರಾಮೀಣ ಬದುಕಿನ ವಾಸ್ತವ ಚಿತ್ರಣವಾದ ಸಿನ್ನೋವ್ ಸೋಲ್ಬಾಕ್ಕೆನ್ ಎಂಬ ಮೊದಲ ಕಾದಂಬರಿ ಪ್ರಕಟಿಸಿ ನಾರ್ವೆ ಸಾಹಿತ್ಯಕ್ಕೊಂದು ಹೊಸ ತಿರುವು ಕೊಟ್ಟ. ಅದೇ ವರ್ಷ ರಚಿತವಾದ ಮಾಲ್ಲಿಮ್‍ಸ್ಲೇಜೀನ್ ಎಂಬ ಮೊದಲ ನಾಟಕ ಪ್ರಥಮ ಪ್ರಯೋಗದಲ್ಲೇ ಯಶಸ್ವಿಯಾಯಿತು. ಇದರ ಇಂಗ್ಲಿಷ್ ಅನುವಾದ ಬಿಟ್ವೀನ್ ದಿ ಬ್ಯಾಟಲ್ಸ್. ಅನಂತರ ಸುಮಾರು ನಾಲ್ಕು ದಶಕಗಳ ಕಾಲದಲ್ಲಿ ಒಟ್ಟು ಹದಿನೆಂಟು ನಾಟಕ, ಏಳು ಕಾದಂಬರಿ, ಕವಿತೆ ಮತ್ತು ಹಾಡುಗಳ ಎರಡು ಸಂಕಲನ, ಅನೇಕ ಸಣ್ಣ ಕತೆಗಳು, ವಿಮರ್ಶಾ ಲೇಖನಗಳು ಬಂದವು.

	ಹೆನ್ರಿಕ್ ವರ್ಜ್ ಲ್ಯಾಂಡಿನ ಆದರ್ಶದ ವಾರಸುದಾರನಾಗಿ ನಾಡಿನ ಸ್ವಾತಂತ್ರ್ಯ ಚಳವಳಿಯ ನೇತಾರನಾದ. ಪತ್ರಕರ್ತನಾಗಿ, ಮಹಾವಾಗ್ಮಿಯಾಗಿ ಸ್ಫೂರ್ತಿ ಯುತಭಾಷಣ ಲೇಖನಗಳಿಂದ ಜನತೆಯಲ್ಲಿ ರಾಷ್ಟ್ರಾಭಿಮಾನ ತುಂಬಿದ.

	ಜನಪದ ಸಾಹಿತ್ಯದ ವಿಶೇಷಾಧ್ಯಯನದ ಫಲವಾಗಿ ಈತನ ಸಾಹಿತ್ಯ ಶಕ್ತಿ, ಸಮೃದ್ಧಿಗಳನ್ನು ಪಡೆಯಿತು. ಈತನ ದೇಶಭಕ್ತಿಯ ಹಾಡುಗಳಲ್ಲಿ ಒಂದು ಈಗ ರಾಷ್ಟ್ರಗೀತೆಯಾಗಿದೆ. ಮೊದಲ ನಾಟಕಗಳೆಲ್ಲ ನಾರ್ವೆಯ ವೀರಪರಂಪರೆಯ ಐತಿಹಾಸಿಕ ವಸ್ತುಗಳನ್ನು ಕುರಿತವು. 1865ರಿಂದೀಚೆಗೆ ಸಮಕಾಲೀನ ಸಮಸ್ಯೆಗಳ ವಿಶ್ಲೇಷಣೆ, ಚರ್ಚೆಗಳನ್ನೊಳಗೊಂಡ ಸಾಮಾಜಿಕ ನಾಟಕಗಳನ್ನು ಬರೆದು ಆಧುನಿಕ ನಾಟಕದ ಪ್ರವರ್ತಕನಾದ. ಈತನ ಪ್ರಿಯಮಿತ್ರನೂ ಬೀಗನೂ ಆದ ಇಬ್ಸೆನ್ ಇದೇ ಜಾಡಿನಲ್ಲಿ ಮುಂದುವರಿದು ಶ್ರೇಷ್ಠ ನಾಟಕಕಾರನಾದ. ಸಿಗುರ್ಡ್ ಕುರಿತ ಮೂರು ನಾಟಕಗಳ ಸರಣಿ; ಇಂದಿಗೂ ಜನಪ್ರಿಯವಾಗಿರುವ ರುದ್ರನಾಟಕ: ಮೇರಿ ಸ್ಟೂಯರ್ಟ್ ಆಫ್ ಸ್ಕಾಟ್ಲೆಂಡ್, ದಿ ನ್ಯೂಲಿ ಮ್ಯಾರೀಡ್ ಕಪಲ್, ಜಾಗ್ರಫಿ ಆಫ್ ಲವ್ ಎಂಬ ಹರ್ಷಕಗಳು, ದಿ ಎಡಿಟರ್, ದಿ ಬ್ಯಾಂಕ್ರಪ್ಟ್‍ಸಿ ಎಂಬ ಸಮಸ್ಯಾ ನಾಟಕಗಳು ಈತನ ಶ್ರೇಷ್ಠ ಕೃತಿಗಳು. ಕಾದಂಬರಿಗಳಲ್ಲಿ ದಿ ಫಿಷರ್ ಮೇಯ್ಡ್‍ನ್, ಫ್ಲ್ಯಾಗ್ಸ್ ಆರ್ ಫ್ಲೈಯಿಂಗ್ ಇನ್ ಟೌನ್ ಅಂಡ್ ಪೋರ್ಟ್. ದಿ ಹೆರಿಟೇಜ್ ಆಫ್ ಕುಟ್ರ್ಸ್ ಇನ್ ಗಾಡ್ಸ್ ವೇ-ಇವು ಶ್ರೇಷ್ಠ ಕೃತಿಗಳು. ವಾಸ್ತವಿಕ ಕಾದಂಬರಿಯ ಹಾಗೂ ನೂತನ ಕಥನ ಶೈಲಿಯ ಮೊದಲಿಗನಾದ ಈತನ ಕೃತಿಗಳಲ್ಲಿ ನಾರ್ವೆಯ ಹಳ್ಳಿಗಾಡಿನ ವರ್ಣರಂಜಿತವಾದ ಬದುಕು ನೈಜವಾಗಿ ಚಿತ್ರಿತವಾಗಿದೆ.

	ಉತ್ಕಟ ರಾಷ್ಟ್ರಾಭಿಮಾನಿಯಾಗಿದ್ದರೂ ಅಂತಾರಾಷ್ಟ್ರೀಯ ಶಾಂತಿ, ಸೌಹಾರ್ದ, ನ್ಯಾಯನಿಷ್ಠೆಗಳಲ್ಲಿ ತೀವ್ರವಾದ ಕಾಳಜಿಯಿದ್ದ ಮನೋಧರ್ಮ ಈತನದು. ಧರ್ಮ, ಸಾಹಿತ್ಯ, ಸಂಸ್ಕøತಿಗಳ ಬಗ್ಗೆ ತನ್ನದೇ ಆದ ಇತ್ಯಾತ್ಮಕ ವಿಕಾಸಶೀಲ ತತ್ತ್ವಗಳನ್ನು ಪ್ರತಿಪಾದಿಸಿದ. ಈತನ ಕೃತಿಗಳೆಲ್ಲ ಉದಾತ್ತಮಾನವತಾ ಧ್ಯೇಯವನ್ನು ಬೋಧಿಸುತ್ತವೆ. ಶುದ್ಧವಾದ ನ್ಯಾಯನಿಷ್ಠುರವಾದ ನೀತಿಶೀಲವಾದ ಜೀವನ ಈತನ ಆದರ್ಶ. ಕಲೆಗಾಗಿ ಕಲೆ ಎಂಬ ತತ್ತ್ವದ ವಿರೋಧಿ.

	ತನ್ನ ಜೀವಿತ ಕಾಲದಲ್ಲೇ ಹೋರಾಟ ಫಲಿಸಿ ನಾರ್ವೆ ಪೂರ್ಣ ಸ್ವತಂತ್ರವಾಗಿ ರಿಪಬ್ಲಿಕ್ ಆದುದನ್ನೂ ರಾಷ್ಟ್ರೀಯ ರಂಗಭೂಮಿ ಸ್ಥಾಪಿತವಾಗಿ ನಾರ್ವೆಯ ವಿಶಿಷ್ಟ ಕಲಾಪರಂಪರೆ ವಿದೇಶೀ ಪ್ರಭಾವದಿಂದ ಮುಕ್ತವಾದುದನ್ನೂ ಕಂಡ ಭಾಗ್ಯವಂತ ಈತ. ರಾಷ್ಟ್ರೀಯ ರಂಗಭೂಮಿಯ ಪ್ರಥಮ ನಿರ್ದೇಶಕ. ವಿಶ್ವಶಾಂತಿಗಾಗಿ ಇರಿಸಿದ ನೊಬೆಲ್ ಪಾರಿತೋಷಿಕದ ಆಯ್ಕೆ ಸಮಿತಿಯ ಸ್ಥಾಪಕ ಸದಸ್ಯ. ಶತಮಾನಗಳ ಕಾಲ ತುಳಿತಕ್ಕೆ ಸಿಕ್ಕ ಅಲ್ಪ ಸಂಖ್ಯಾತರ ಪರವಾಗಿ, ಶೋಷಣೆಗೊಳಗಾದ ದುರ್ಬಲವರ್ಗದವರ ಪರವಾಗಿ ಎತ್ತಿದ ಈತನ ಪ್ರತಿಭಟನೆಯ ಧ್ವನಿ ಯೂರೊಪಿನಾದ್ಯಂತ ಪ್ರತಿಧ್ವನಿಸಿತು. 1903ರಲ್ಲಿ ತನ್ನ ಶ್ರೇಷ್ಠ ಸಾಹಿತ್ಯ ಕೃತಿಗಳಿಗಾಗಿ ನೊಬೆಲ್ ಬಹುಮಾನ ಪಡೆದ. ಪ್ಯಾರಿಸಿನಲ್ಲಿ ಮರಣ ಹೊಂದಿದ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ